ಎಕಿನಾಯ್ಡಿಯ
	ಕಂಟಕಚರ್ಮಿ ವಂಶಕ್ಕೆ ಸೇರಿದ ಒಂದು ವರ್ಗ. ಇದರ ಶರೀರದ ಮೇಲೆ ಹೆಚ್ಚು ಕಡಿಮೆ ದುಂಡಾದ, ಗಟ್ಟಿಯಾದ ಕವಚವಿದೆ. ಈ ಕವಚ ಓರಣವಾಗಿ ಜೋಡಿಸಲ್ಪಟ್ಟ ತಟ್ಟೆಗಳಿಂದ ಆದದ್ದು. ತಟ್ಟೆಗಳ ಮೇಲೆ ಚಲಿಸುವ ಮುಳ್ಳುಗಳಿವೆ. ಈ ಪ್ರಾಣಿಗಳಿಗೆ ಕೈಕಾಲುಗಳಿಲ್ಲ. ಆದರೆ 5 ಜೋಡಿ ಸಾಲು ಕೊಳವೆ ಕಾಲುಗಳು ಶರೀರದ ಮೇಲ್ಕೋನದಿಂದ ಕೆಳಕೋನದವರೆಗೂ ಇವೆ. 850 ಪ್ರಭೇದಗಳಿವೆ. 225 ಜಾತಿಗೆ ಸೇರಿದ 5,000 ಪಳಿಯುಳಿಕೆಗಳಿವೆ. ಈ ಪ್ರಾಣಿಗಳ ಶರೀರದಲ್ಲಿರುವ ಎಕಿನೊಕ್ರೋಮ್ ವರ್ಣದ್ರವ್ಯ ಬೇರೆ ಯಾವ ಎಕಿನೊಡರ್‍ಮೇಟ ವರ್ಗದಲ್ಲೂ ಇಲ್ಲ. ಅನೇಕ ಎಕಿಯ್ಡಿಯ ಜೀವಿಗಳು ಮಂಕು ಕಪ್ಪು ಬಣ್ಣದವಾಗಿದ್ದರೂ ಕೆಲವು ಉಜ್ವಲ ಛಾಯೆಯುಳ್ಳ ಕೆನ್ನೀಲಿ, ಕೆಂಪು, ಹಸಿರು ಅಥವಾ ಕಿತ್ತಳೆಬಣ್ಣದಾಗಿವೆ. ಮತ್ತೆ ಕೆಲವಕ್ಕೆ ಬಣ್ಣ ಬಣ್ಣದ ಗೀರುಗಳುಳ್ಳ ಮುಳ್ಳುಗಳಿರುತ್ತವೆ. ಸಮುದ್ರತಳದಲ್ಲಿ ವಾಸಿಸುವುದಕ್ಕೆ ಬಿಳಿಯ ಬಣ್ಣವಿರಬಹುದು.

	ಈ ಪ್ರಾಣಿಗಳಲ್ಲಿ ಎರಡು ಮುಖ್ಯ ಪಂಗಡಗಳಿವೆ: ಎಂಡೊಸೈಕ್ಲಿಕ ಮತ್ತು ಎಕ್ಸೊಸೈಕ್ಲಿಕ. ಎಂಡೊಸೈಕ್ಲಿಕ ಪಂಗಡಕ್ಕೆ ಸೇರಿದ ಪ್ರಾಣಿಗಳ ಹೆಸರು ಹಾರ್ಟ್ ಕಡಲ ಕುಡಿಕೆ. ಎಕ್ಸೊಸೈಕ್ಲಿಕ ಪಂಗಡಕ್ಕೆ ಹಾಟ್ ಆರ್ಚಿನ್, ಸ್ಯಾಂಡ್ ಡಾಲರ್ ಮತ್ತು ಕೇಕ್ ಆರ್ಚಿನ್‍ಗಳನ್ನು ಸೇರಿಸಲಾಗಿದೆ. ಸೀ ಆರ್ಚಿನ್ನಿನ ಕವಚ ಗುಂಡು. ಎಕ್ಸೊಸೈಕ್ಲಿಕದ ಕವಚ ಚಪ್ಪಟೆ. ಕವಚದ ಮೇಲ್ಭಾಗದಲ್ಲಿ ಒಂದು ಗುಂಪಾಗಿ ಜೋಡಿಸಲ್ಪಟ್ಟಿರುವ ಹತ್ತು ತಟ್ಟೆಗಳಿವೆ. ಇದಕ್ಕೆ ಎಪಿಕಲ್ ಸಮೂಹ ಎಂದು ಹೆಸರು. ಇವುಗಳ ಮಧ್ಯದ ತಟ್ಟೆಗೆ ಪೆರಿಪ್ರಾಕ್ಟ ಎಂದು ಹೆಸರು. ಎಂಡೊಸೈಕ್ಲಿಕಗಳಿಗೆ ಆಸನದ್ವಾರ ಪೆರಿಪ್ರಾಕ್ಟದ ಮಧ್ಯದಲ್ಲಿರುತ್ತದೆ; ಎಕ್ಸೊಸೈಕ್ಲಿಕಗಳಿಗೆ ಪೆರಿಪ್ರಾಕ್ಟದ ಮತ್ತು ಎಪಿಕಲ್ ಸಮೂಹದ ಹೊರಗೆ ಇರುತ್ತದೆ. ಸ್ಯಾಂಡ್ ಡಾಲರಿನ ಕವಚ ತೆಳ್ಳನೆಯ ದುಂಡು ನಾಣ್ಯದಂತಿದೆ. ಹಾರ್ಟ್ ಅರ್ಚಿನ್ನಿನ ಕವಚ ಅಂಡಾಕಾರದ ದಿಂಬಿನಂತಿದೆ. ಇವುಗಳ ಬಾಯಿ ಶರೀರದ ಕೆಳಭಾಗದಲ್ಲಿದೆ. ಬಾಯಲ್ಲಿರುವ ಅಗಿಯುವ ಯಂತ್ರಕ್ಕೆ ಅರಿಸ್ಟಾಟಲನ ಲಾಟೀನು ಎಂದು ಹೆಸರು. ಇದು ಅನೇಕ ತುಂಡುಗಳಿಂದಾದ ಜಟಿಲವಾದ ಅಂಗ. ಇದರಲ್ಲಿ ಐದು ಬಲವಾದ ಹಲ್ಲುಗಳಿವೆ.

	ಕವಚದ ಮೇಲೆ ಚಿಕ್ಕ ಆದರೂ ಬಿಗಿಯುಳ್ಳ ಅಂಗಗಳಿವೆ. ಇವಕ್ಕೆ ಪೆಡಿಸಲ್ಲೇರಿಯ ಎಂದು ಹೆಸರು. ಇವು ಕಡ್ಡಿಯ ಮೇಲಿರುವ ಕೊಕ್ಕಿನಂತಿವೆ. ಕೊಕ್ಕಿನಲ್ಲಿ ಚಲಿಸುವ ಮೂರು ದವಡೆಗಳಿವೆ. ಕೆಲವಕ್ಕೆ ವಿಷಗ್ರಂಥಿ ಇವೆ. ತಮ್ಮ ಕವಚವನ್ನು ಮುಟ್ಟಿದ ಚಿಕ್ಕ ಪ್ರಾಣಿಗಳನ್ನಾಗಲಿ, ಪದಾರ್ಥಗಳನ್ನಾಗಲಿ ಇವು ಹಿಡಿದು ಹೊರಗೆ ಹಾಕುವುವು. ಇವು ತಮ್ಮ ಕವಚವನ್ನು ಸದಾ ಶುಭ್ರವಾಗಿಟ್ಟಿರುವುವು.

	ಉಷ್ಣದೇಶದ ಸಮುದ್ರಗಳಲ್ಲಿ ವಾಸಿಸುವ ಪ್ರಾಣಿಗಳ ಕವಚದ ಮೇಲೆ ಟೊಳ್ಳಾದ ಮುಳ್ಳುಗಳಿವೆ. ಇವು ಬೇರೆ ಪ್ರಾಣಿಯ ಚರ್ಮವನ್ನು ಚುಚ್ಚಿದ ಮೇಲೆ ಮುರಿದು ಹೋದರೆ ವಿಷಕಾರಿ ಗಾಯಗಳನ್ನುಂಟುಮಾಡುವುವು. ಲಿಸ್ತೆನೊಸೋಮದ ಮುಳ್ಳುಗಳು ಮನುಷ್ಯನನ್ನು ಕೊಲ್ಲಬಲ್ಲವು. ಆದರೆ ಅನೇಕ ಎಕಿನಾಯ್ಡಿಯಗಳು ನಿರುಪದ್ರವಿಗಳು, ಕೆಲವು ದ್ವೀಪಗಳಲ್ಲಿ ಇದನ್ನು ಆಹಾರವಾಗಿ ಬಳಸುತ್ತಾರೆ. ಮೊಟ್ಟೆಯಿಡುವ ಕಾಲದಲ್ಲಿ ಇವು ಬಹು ರುಚಿ ಎಂದು ನಂಬಿಕೆ. ಬಾರ್‍ಬಡಾಸ್ ದ್ವೀಪಗಳಲ್ಲಿ ಮೀನುಗಾರಿಕೆಯಂತೆ ಇವನ್ನು ಹಿಡಿಯುವುದೂ ಒಂದು ಉದ್ಯಮ.

	ಎಕಿನಾಯ್ಡಿಯ ಸಮುದ್ರವಾಸಿಗಳು. ಸೀ ಆರ್ಚಿನ್ ಸಮುದ್ರ ತೀರದ ಬಂಡೆಗಳಲ್ಲಿ ವಾಸಿಸುತ್ತದೆ. ಇದು ಬಂಡೆಯನ್ನು ಕೊರೆಯಬಲ್ಲದು. ಇದರ ಮುಖ್ಯ ಆಹಾರ ಏಕಕೋಶ ಸಸ್ಯಗಳು. ಬಂಡೆಗಳಿಗೆ ಅಂಟಿರುವ ಸಣ್ಣ ಪ್ರಾಣಿಗಳನ್ನೂ ತಿನ್ನಬಹುದು. ಇದು ಒಂದು ವರ್ಷದಲ್ಲಿ ಪ್ರಾಯಕ್ಕೆ ಬಂದರೂ ಅನೇಕ ವರ್ಷ ಬೆಳೆಯುತ್ತ ಹೋಗುವುದು. ಇದರ ಆಯಸ್ಸು 5-6 ವರ್ಷ. ಕೆಲವು ಉಭಯ ಲಿಂಗಿಗಳಾಗಿದ್ದರೂ ಸಾಧಾರಣವಾಗಿ ಲಿಂಗಭೇದವಿದೆ. ಮರಿಹುಳು ಸಮುದ್ರದ ಮೇಲೆ ತೇಲುತ್ತದೆ. ಇದಕ್ಕೆ ಎಕಿನೊ ಪ್ಲೂಟಿಯಸ್ ಎಂದು ಹೆಸರು. ಕೆಲವು ಮುಳ್ಳುಗಳ ಬುಡದಲ್ಲಿ ಮರಿಮಾಡುವುವು. ಸೀ ಆರ್ಚಿನ್ ಮುಳ್ಳುಗಳ ಬುಡದಲ್ಲಿರುವ ಸ್ನಾಯುಗಳ ಸಹಾಯದಿಂದ ಮುಳ್ಳುಗಳನ್ನು ಊರಿಕೊಂಡು ನಿಧಾನವಾಗಿ ನಡೆಯುವುದು. ಮುರಿದುಹೋದ ಮುಳ್ಳುಗಳು ತಿರುಗಿ ಬೆಳೆಯುತ್ತದೆ. ಎಕ್ಸೊಸೈಕ್ಲಿಕ್ ಪಂಗಡದ ಸಮುದ್ರದ ಮರಳಿನಲ್ಲಿ ಹೂತುಕೊಂಡು ಮಣ್ಣಿನಲ್ಲಿ ಬೆರತಿರುವ ಪುಡಿಯಾದ ಆಹಾರವನ್ನು ತಿನ್ನುವುವು. ಅನೇಕವು ಸಾಮೂಹಿಕ ಜೀವಿಗಳು. ಕೆಲವು ಬೇಟೆಯಾಡುತ್ತವೆ. ಕೆಲವು ಕೊಳೆತ ಮಾಂಸ ತಿನ್ನುತ್ತವೆ.

	ಕೆಲವು ಪ್ರಾಣಿಗಳು ಸೀ ಆರ್ಚಿನ್ನಿನ ಕವಚವನ್ನು ತೂತುಮಾಡಿ ಅದರಲ್ಲಿ ಪರಾವಲಂಬಿಗಳಾಗಿ ಜೀವಿಸುತ್ತವೆ. ಏಡಿಕಾಯಿಗಳು ಗುದದ್ವಾರದಲ್ಲೋ ಕವಚದ ಮೇಲೋ ವಾಸಿಸಿಕೊಂಡು ಅದರ ಮುಳ್ಳುಗಳನ್ನೋ ಕೊಳವೆಕಾಲುಗಳನ್ನೋ ತಿಂದುಕೊಂಡಿರುತ್ತವೆ. ಕೆಲವು ಪ್ರಾಣಿಗಳು ಮುಳ್ಳುಗಳ ಮಧ್ಯೆ ರಕ್ಷಣೆ ತೆಗೆದುಕೊಳ್ಳುತ್ತವೆ. 						
     (ಎಸ್.ಎನ್.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ